ಕೈಯ ರೋಗಗಳು, ಊನಗಳು ಮತ್ತು ನಿರುಪಯುಕ್ತೆಗಳು	

	ಕೈಯ ಧರ್ಮ, ಸ್ನಾಯು, ರಜ್ಜು, ಮೂಳೆ, ಕೀಲು, ನರ ಮುಂತಾದವುಗಳಲ್ಲಿ ಒಂದು ಅಥವಾ ಹೆಚ್ಚು ಅಂಶವನ್ನು ಒಳಗೊಂಡು ಕೈಯ ರೋಗವಾಗಲಿ ಊನವಾಗಲಿ ನಿರುಪಯುಕ್ತತೆಯಾಗಲಿ ಪ್ರಾಪ್ತವಾಗಬಹುದು. ಕೈಯರೋಗಗಳು ಬಾಲ್ಯದಲ್ಲಿ ಅಥವಾ ನಡುವಯಸ್ಸಿನಲ್ಲಿ ಸಾಮಾನ್ಯ. ಕೆಲಸಮಾಡುವಾಗ ಇಲ್ಲವೇ ಮತ್ತೆ ಯಾವಾಗಲೋ ಆದ ಗಾಯವೇ ಅನೇಕ ವೇಳೆ ಇದಕ್ಕೆ ಮೂಲ. ಈ ರೀತಿಯಿಂದ ಸಂಭವಿಸಿದ ಕೈಯ ರೋಗಗಳು ತಾತ್ಕಾಲಿಕವಾದವುಗಳಾಗಲಿ ಬಹುಕಾಲೀಕವಾದವುಗಳಾಗಲಿ ಆಗಿರಬಹುದು. ಇವು ಪೂರ್ಣವಾಗಿ ಗುರುತೇ ಉಳಿಯದಂತೆ ವಾಸಿಯಾಗಿ ಹೋಗಬಹುದು. ಇಲ್ಲವೇ ಶಾಶ್ವತವಾದ ಊನವನ್ನೋ ನಿರುಪಯುಕ್ತತೆಯನ್ನೋ ಉಂಟುಮಾಡಬಹುದು. ಊನಗಳು ರೋಗದ ಪರಿಣಾಮವಾಗಿ ಮಾತ್ರವಲ್ಲ ಹುಟ್ಟುವಾಗ ಸಹ ಇರುವುದುಂಟು. ತೋಳು, ಭುಜ ಮುಂತಾದ ಇತರ ಸ್ಥಳಗಳಲ್ಲಿ ಉಂಟಾದ ಘಾತ, ರೋಗಗಳ ಪರಿಣಾಮವಾಗಿಯೂ ಕೈಗೇ ಆದ ನೇರ ಘಾತದಿಂದಲೂ ಕೈ ಊನಗಳು ಉಂಟಾಗುತ್ತವೆ. ಯಾವುದಾದರೂ ಕಾರಣದಿಂದ ಕೈಯನ್ನು ತಿಂಗಳ ಗಟ್ಟಲೆ ಚಲಿಸದೇ ಇದ್ದರೆ ತಾತ್ಕಾಲಿಕವಾಗಿಯೋ ಕೈ ಸೆಟೆದುಕೊಂಡು ಊನವಾಗಬಹುದು. ಊನವಾದ ಕೈ ಯಾವಾಗಲೂ ನಿರುಪಯುಕ್ತವಾಗಿರುತ್ತದೆ ಎಂದು ಹೇಳುವಂತಿಲ್ಲ. ಜನ್ಮತಃ ಕಂಡುಬರುವ ಅನೇಕ ರೀತಿಯ ಊನಗಳನ್ನು ಬಲುಮಟ್ಟಿಗೆ ಹತ್ತಿಕ್ಕಿ ಕೈಯ ಉಪಯೋಗವನ್ನೇನೋ ಹೆಚ್ಚು ಕಡಿಮೆ ಸಹಜವಾಗಿ ಮಾಡಬಹುದು. ಮುಖ್ಯವಾಗಿ ಮುಷ್ಟಿಯ ಬಿಗಿಹಿಡಿತ ಮತ್ತು ಹೆಬ್ಬೆರಳು ಇತರ ಬೆರಳುಗಳ ಮಧ್ಯೆ ಚಿಮಟದಂಥ ಹಿಡಿತ ಇವುಗಳ ಮೇಲೆಯೇ ಕೈಯ ಉಪಯೋಗ ನಿಂತಿದೆ. ಈ ಮುಷ್ಟಿಹಿಡಿತ ಮತ್ತು ಚಿಮಟಹಿಡಿತ ಮಾನವನ ಕೈಯಲ್ಲಿ ಅಷ್ಟು ಸಾರ್ಥಕವಾಗಿರುವುದು ಹೆಬ್ಬೆರಳು ಮಿಕ್ಕ ಬೆರಳುಗಳ ಕಡೆ ಚಲಿಸಿ ಅವುಗಳ ತುದಿಯನ್ನು (ಕಿರುಬೆರಳಿನ ತುದಿಯನ್ನು ಕೂಡ) ಸಂಧಿಸುವಂತೆ ಇರುವ ವೈಶಿಷ್ಟ್ಯದಿಂದಲೇ. ಈ ಚಲನೆ ಮಾನವನ ಕೈಯಲ್ಲಿ ಅಷ್ಟೊಂದು ಮೇಲ್ಮಟ್ಟದ್ದಾಗಿರುವುದರಿಂದಲೂ ಸೂಕ್ಷ್ಮತೆ ಪಡೆದಿರುವುದರಿಂದಲೂ ಬರೆವಣಿಗೆ, ಹೊಲಿಗೆ ಮುಂತಾದ ಕ್ಲಿಷ್ಟ ಮತ್ತು ನಾಜೂಕಾದ ಕೆಲಸಗಳೂ ಬಿಗಿಹಿಡಿತಬೇಕಾದ ಗಡಸು ಕೆಲಸಗಳೂ ಆತನಿಗೆ ಸಾಧ್ಯವಾಗಿದೆ. ಕೈಚಲನೆ ಪರಿಣಾಮಕಾರಿಯಾಗಬೇಕಾದರೆ ಸ್ಪರ್ಶಜ್ಞಾನ ಸಹಜಸ್ಥಿತಿಯಲ್ಲಿರಬೇಕಾದದ್ದು ಆವಶ್ಯಕ. ಘಾತ, ರೋಗ, ಊನಗಳಿಂದ ಕೈಯ ಸ್ಪರ್ಶಜ್ಞಾನ ನಾಶವಾದಾಗ ಹಾಗೂ ಮುಷ್ಟಿ ಮತ್ತು ಚಿಮಟ ಹಿಡಿತಗಳು ಸಾಧ್ಯವಾಗದಿದ್ದಾಗ ಸ್ವಾಭಾವಿಕವಾಗಿಯೇ ಕೈ ನಿರುಪಯುಕ್ತವಾಗುತ್ತದೆ. ಇದು ವಿಶೇಷವಾಗಿ ಹೆಬ್ಬೆರಳಿನ ಚಲನೆಗೆ ಅನ್ವಯಿಸುವ ಮಾತು. ಹೆಬ್ಬೆರಳು ಹೀಗೆ ನಿರ್ಬಲಗೊಂಡರೆ ಕೈ ಮುಕ್ಕಾಲು ಪಾಲಿಗಿಂತ ಹೆಚ್ಚೇ ನಿರುಪಯುಕ್ತವಾಯಿತೆಂದು ಭಾವಿಸಬಹುದು. ಹೀಗಿಲ್ಲದೆ ಹೆಬ್ಬೆರಳಿಗೆ ಚಲನ ಸಾಮಥ್ರ್ಯ ಸಹಜವಾಗಿದ್ದು ಮಿಕ್ಕ ಒಂದೋ ಎರಡೋ ಕೊನೆಗೆ ಮೂರು ಬೆರಳುಗಳು ನಾಶವಾದರೂ ಕ್ರಮೇಣ ಅನುಭವದಿಂದ ಕೈಯ ಕ್ರಿಯಾಶಕ್ತಿಯನ್ನು ಹೆಚ್ಚು ಕಡಿಮೆ ಪಡೆಯಬಹುದು. ಅದನ್ನು ತೀರ ಹತಾಶ ಪರಿಸ್ಥಿತಿ ಎಂದು ಪರಿಗಣಿಸಲಾಗದು.

	ಕೈಗಳು ಹುಟ್ಟುವಾಗಲೇ ಊನವಾಗಿ ವಿರೂಪವಾಗಿರಬಹುದು. ಕೆಲವರ ಕೈಯಲ್ಲಿ ಆರು ಬೆರಳುಗಳು, ಏಳು ಬೆರಳುಗಳು ಕೂಡ ಇರುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಈ ಹೆಚ್ಚಿನ ಬೆರಳು ಸಾಧಾರಣವಾಗಿ ಕಿರುಬೆರಳಿಗೋ ಹೆಬ್ಬೆರಳಿಗೋ ಅದರ ಬುಡದಲ್ಲಿಯೋ ಮಧ್ಯದಲ್ಲಿಯೋ ಒಂದು ಕವಲಿನಂತೆ ಅಂಟಿಕೊಂಡಿರುತ್ತದೆ. ಅಪೂರ್ವವಾಗಿ ಬೇರೆ ಬರಳು ಯಾವುದರಲ್ಲಿಯೂ ಈ ರೀತಿಯ ಕವಲು ಇರಬಹುದು. ಈ ಹೆಚ್ಚಿನ ಬೆರಳಿನಲ್ಲಿ ಮೂಳೆ ಮಾಂಸ ನರಗಳೆಲ್ಲ ಸಾಮಾನ್ಯವಾದ ಬೆರಳಿನಲ್ಲಿರುವಂತೆಯೇ ಇದ್ದು ಕೊಂಚಮಟ್ಟಿಗೆ ಅದನ್ನು ಅಲ್ಲಾಡಿಸುವುದು ಸಹ ಸಾಧ್ಯವಾಗಬಹುದು. ಇಲ್ಲವೇ ಆ ಅಧಿಕ ಬೆರಳು ಹತ್ತಿಸಿಂಬಿಯಂತೆ ಮೆತ್ತಗೆ ಇರಬಹುದು. ಈ ಹೆಚ್ಚುವರಿ ಬೆರಳುಗಳಿಂದ ಸಾಮಾನ್ಯವಾಗಿ ಕೈಯ ಸಹಜಕಾರ್ಯ ವಿಚಕ್ಷಣತೆಗೆ ಕುಂದಿರುವುದಿಲ್ಲ. ಹಾಗಿಲ್ಲದೆ ತೊಂದರೆಯಾಗಿದ್ದರೆ ಮಾತ್ರ ಶಸ್ತ್ರಚಿಕಿತ್ಸೆಯನ್ನು ಯೋಚಿಸಬಹುದು. ಅರೂಪವಾಗಿದೆ ಎಂದಮಾತ್ರಕ್ಕೆ ಶಸ್ತ್ರಚಿಕಿತ್ಸೆ ಸಲ್ಲದು. ಈ ಸ್ಥಿತಿಗೆ ವ್ಯತಿರಿಕ್ತವಾಗಿ ಕೈಯಲ್ಲಿ ಒಂದೋ ಎರಡೋ ಕೊನೆಗೆ ಮೂರು ಬೆರಳುಗಳು ಲೋಪವಾಗಿರಬಹುದು. ಕೆಲವು ವೇಳೆ ಒಂದು ಬೆರಳು ಸಹಜವಾಗಿರುವುದಕ್ಕಿಂತ ದೊಡ್ಡದಾಗಿ ದೈತ್ಯಾಕಾರ ತಳೆದಿರಬಹುದು. ಕೈಕೆಲಸಕ್ಕೆ ಅಡಚಣೆ ಆಗದಿದ್ದರೆ ಇದೂ ಅಗಣನೀಯ ಸ್ಥಿತಿ. ಇದಕ್ಕೆ ಬದಲು ಒಂದು ಬೆರಳು ಸಹಜಪ್ರಮಾಣಕ್ಕಿಂತ ಕುಳ್ಳಾಗಿಯೋ ಒಂದೆರಡು ಮಣಿಗಳು ಲೋಪವಾಗಿಯೋ ಇರಬಹುದು. ಹುಟ್ಟುವಾಗಲೇ ಎರಡು ಬೆರಳುಗಳು ಕೂಡಿಕೊಂಡಿರುವುದು ಅನೇಕವೇಳೆ ಕಂಡುಬಂದಿದೆ. ಇದು ಸಾಮಾನ್ಯವಾಗಿ ಎರಡು ಕೈಗಳಲ್ಲೂ ಎರಡು ಕಾಲುಗಳಲ್ಲೂ ಒಟ್ಟಿಗೆ ಕಾಣಬರುವ ಸ್ಥಿತಿ. ಮಧ್ಯದ ಬೆರಳಿನ ಜೊತೆಗೆ ಉಂಗುರದ ಬೆರಳೋ ತೋರುಬೆರಳೋ ಸೇರಿಕೊಂಡಿರುವುದೇ ಸಾಮಾನ್ಯ. ಈ ಬೆರಳುಗಳು ಬುಡದಿಂದ ತುದಿಯವರೆಗೂ ಸೇರಿಕೊಂಡಿರಬಹುದು; ಇಲ್ಲವೇ ಬುಡದಿಂದ ಸ್ವಲ್ಪ ಭಾಗವೇ ಸೇರಿಕೊಂಡಿರಬಹುದು. ಎರಡು ಬೆರಳುಗಳನ್ನು ಸೇರಿಸುವ ಭಾಗ ತೆಳುವಾಗಿ ಅಗಲವಾಗಿ ವಪೆಯಂತೆ ಹರಡಿಕೊಂಡಿರಬಹುದು. ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ ಅನುವಂಶೀಯವಾಗಿ ಕಾಣ ಬರುವ ಇನ್ನೊಂದು ಸ್ಥಿತಿ ಉಬ್ಬಿಡೊಂಕಾಗಿರುವ ಕಿರುಬೆರಳು. ಈ ಸ್ಥಿತಿಯಲ್ಲಿ ಅಂಗೈಯನ್ನು ನೆಲದಮೇಲೆ ಇಟ್ಟರೆ ಕಿರುಬೆರಳು ಪೂರ್ತ ನೆಲದಮೇಲೆ ಕೂರದೆ ಮಧ್ಯಭಾಗ ಮೇಲುಬ್ಬಿಕೊಂಡಿರುತ್ತದೆ. ಇದರಿಂದಲೂ ಏನೂ ತೊಂದರೆ ಇರುವುದಿಲ್ಲ. ಅನುವಂಶೀಯವಾಗಿ ಕಂಡುಬರುವ ಊನಗಳನ್ನು ಬಿಟ್ಟರೆ ಮಿಕ್ಕ ಆಜನ್ಮ ಊನಗಳು ಆಕಸ್ಮಿಕವಾಗಿಯೋ ಇತರ ತಿಳಿದ ಕಾರಣಗಳಿಂದಲೋ ಭ್ರೂಣಾವಸ್ಥೆಯಲ್ಲಿ ಸಂಭವಿಸುವ ಆಘಾತದಿಂದುಂಟಾಗುತ್ತವೆ. ಥ್ಯಾಲಿಡೊಮೈಡ್ ಎಂಬ ಸಂವೇದನಾ ನಾಶಕ ವಸ್ತುವನ್ನು ಗರ್ಭಿಣಿ ಸೇವಿಸಿದರೆ ಅಥವಾ ಗರ್ಭಿಣಿಯರಿಗೆ ರೂಬೆಲ್ಲ ಎಂಬ ದಡಾರದಂಥ ರೋಗ ಸಂಭವಿಸಿದರೆ ಈ ರೀತಿ ಭ್ರೂಣಾವಸ್ಥೆಯಲ್ಲೇ ಶಿಶುವಿನ ಕೈಕಾಲುಗಳು ಊನವಾಗಬಹುದು. ಕಳೆದ ಯುದ್ಧದಲ್ಲಿ ಜಪಾನಿನ ಹಿರೋಷಿಮ, ನಾಗಸಾಕಿಗಳಲ್ಲಿ ಪರಮಾಣು ಬಾಂಬನ್ನು ಸ್ಫೋಟಿಸಿದ ಮೇಲೆ ಭ್ರೂಣಾವಸ್ಥೆಯಲ್ಲಾದ ಇಂಥ ಕಾರಣದಿಂದಲೇ ಅಲ್ಲಿ ಹುಟ್ಟಿದ ಬಹುಮಕ್ಕಳು ಅಂಗವಿಕಲವಾಗಿದ್ದುವು. ಆಜನ್ಮವಾಗಿಯಲ್ಲದೆ ಗಾಯಗಳಿಂದ ಕೈಗಳು ಪೀಡಿತವಾಗಿ ನಿರುಪಯುಕ್ತವಾಗಬಹುದು, ಊನವಾಗಬಹುದು. ಗಾಯಗಳು ಪ್ರಾರಂಭದಲ್ಲಿ ಅಗಣನೀಯವಾಗಿಯೇ ಇರಬಹುದಾದರೂ ಅನೇಕವೇಳೆ ತಕ್ಕ ಚಿಕಿತ್ಸೆ ಮಾಡದೆ ಬಿಟ್ಟರೆ ಕೈಊನವಾಗುವುದು ಖಂಡಿತ. ಗಾಯ ಕೈಗೇ ಸೀಮಿತವಾಗದೆ ಹರಡಿ ಕೊನೆಗೆ ಪ್ರಾಣಾಂತಕವೂ ಆಗಬಹುದು. ಹೊಪ್ಪಳೆಗಳು, ತರಚು ಮತ್ತು ಜಜ್ಜು ಗಾಯಗಳು, ಬಿರುಕು, ಚಾಕು ಕುಡಗೋಲು ಈಳಿಗೆಮಣೆಗಳಿಂದಾಗುವ ಸಣ್ಣ ಕೊಯ್ತಗಳು, ಮೊಳೆ ಮುಳ್ಳು ಸಿಬಿರು ಸೂಜಿ ಮುಂತಾದುವುಗಳೀಂದಾದ ಚುಚ್ಚುಗಾಯಗಳು, ಗಾಜು ಮರದ ಚೂರು ಹೊಕ್ಕಿಕೊಳ್ಳುವಿಕೆ ಇತ್ಯಾದಿಗಳು ಕೈಯ ಯಾವ ಭಾಗದಲ್ಲೇ ಆಗಲಿ ಉಂಟಾಗಬಹುದು. ಇವುಗಳಿಗೆ ತತ್‍ಕ್ಷಣ ಚಿಕಿತ್ಸೆ ಆವಶ್ಯಕ. ರಸ್ತೆ ಆಕಸ್ಮಿಕದಲ್ಲಿ ಸುಲಿದು ಹೋಗಿಯೋ ಸುಟ್ಟಗಾಯದ ಪರಿಣಾಮವಾಗಿಯೋ ಕೈಯ ಚರ್ಮ ನಾಶವಾಗಬಹುದು. ಗಾಯ ವಾಸಿಯಾದ ಮೇಲೆ ಧರ್ಮ ಸುಕ್ಕಿ ಸೇದಿಕೊಂಡು ಕೈ ಅರೂಪವಾಗಿ ಬೆರಳುಳು ತೆಗೆಯುವುದಕ್ಕೂ ಮಡಚುವುದಕ್ಕೂ ಸಾಧ್ಯವಾಗದೆ ಹೋಗುತ್ತವೆ. ಹೀಗಾದಾಗ ಶಸ್ತ್ರಚಿಕಿತ್ಸೆಯಿಂದ ಬಿಗಿದಿರುವ ಸ್ಥಳಗಳನ್ನು ಬಿಡಿಸಿ ನಾಶವಾದ ಚರ್ಮದ ಸ್ಥಳದಲ್ಲಿ ಸ್ವದೇಹದ ಧರ್ಮವನ್ನು ನಾಟಿಹಾಕಿ ಗುಣಪಡಿಸಬೇಕಾಗುತ್ತದೆ. ಬೆರಳಿನ ತುದಿ ಭಾರಾದ ಪದಾರ್ಥಗಳ ಅಡಿಯಲ್ಲೋ ಕಿಟಕಿಬಾಗಿಲುಗಳ ಸಂದಿಯಲ್ಲೋ ಸಿಕ್ಕಿಹಾಕಿಕೊಂಡು ಅಥವಾ ಸುತ್ತಿಗೆಯ ಏಟು ಬಿದ್ದು ಜಜ್ಜಿಹೋಗಬಹುದು. ಇದು ಪೂರ್ಣವಾಗಿ ವಾಸಿಯಾಗುವುದು ಸಾಮಾನ್ಯ, ಇಲ್ಲವೇ ಕೀತುಗೊಂಡರೂ ಘಾತವಾದ ಬೆರಳಿನ ತುದಿ ಣಶಿಸಿ ಕೊನೆಗೆ ಬಿದ್ದುಹೋಗಬಹುದು. ಹೀಗಾದರೂ ಪರವಾಗಿಲ್ಲ. ಅದರ ಬದಲು ಯಾವಾಗಲೂ ನೋಯುತ್ತಿರುವ ಮೂಗಗಾಯ ಉಳಿದುಬಿಟ್ಟರೆ ತೊಂದರೆ. ಹೀಗಾಗಿದ್ದರೆ ನೋಯುತ್ತಿರುವ ಭಾಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕಿಬಿಡುವುದು ವಾಸಿ. ನೇರ ಗಾಯದ ಪರಿಣಾಮವಾಗಿ ಬೆರಳುಗಳನ್ನು ಚಲಿಸುವ ಸ್ನಾಯು ಮಾಂಸಖಂಡಗಳೋ ಚಲನೆಯನ್ನು ನಿರ್ದೇಶಿಸುವ ನರಗಳೋ ಕಿತ್ತುಹೋಗಬಹುದು. ಹೀಗಾದರೆ ಕೈ ನಿಷ್ಪ್ರಯೋಜಕವಾಗುತ್ತದೆ. ಮೂಗಗಾಯದಿಂದ ಸ್ನಾಯುಗಳು ಒಳಗೇ ಕತ್ತರಿಸಿಹೋಗುವ ಪ್ರಸಂಗಗಳೂ ಇವೆ. ನೆಟ್ಟುಕೊಂಡಿರುವ ಬೆರಳಿನ ತುದಿಮಣಿಯನ್ನು ನೆಟ್ಟಗೆ ಮಾಡುವುದಕ್ಕೆ ಆಗದೆ, ಅದು ಕೊಕ್ಕೆಯಂತೆ ಬಗ್ಗಿಕೊಂಡಿರುತ್ತದೆ. ಇದು ಕ್ರಿಕೆಟ್ ಆಟಗಾರರಲ್ಲೂ ಸಂಭವಿಸಬಹುದಾದ ಊನ, ಬಹುಕಾಲ ಮೃದಂಗ, ತಬಲ ಮುಂತಾದ ತಾಳ ವಾದ್ಯಗಳನ್ನು ಬಾರಿಸುತ್ತಿರುವವರಲ್ಲಿ ಕೆಲವರಲ್ಲಿ ಹೆಬ್ಬೆರಳಿನ ಸ್ನಾಯುಗಳು ಅತಿಯಾದ ಚಲನದಿಂದ ಜೀರ್ಣಗೊಂಡು ಕೊನೆಗೆ ಕಿತ್ತುಹೋಗಿರುವುದೂ ತಿಳಿದಿದೆ. ಹೀಗಾದರೆ ಹೆಬ್ಬೆರಳಿನ ಚಲನೆ ಅಲ್ಪವಾಗಿಯೋ ಬಹುವಾಗಿಯೋ ಕುಂದಿ ಅಷ್ಟುಮಟ್ಟಿಗೆ ಕೈಯೂ ನಿರ್ಬಲಗೊಳ್ಳುತ್ತದೆ. ನೇರ ಗಾಯದಿಂದ ಕೈ ಮೂಳೆಗಳು ಮುರಿದುಹೋಗಬಹುದು. ಸಾಮಾನ್ಯವಾಗಿ ಮೂಳೆಗಳು ಸೇರಿಕೊಂಡು ಏನೂ ತೊಂದರೆ ಉಳಿಯದೆ ವಾಸಿಯಾಗುತ್ತವೆ. ಚಲಿಸುವ ಯಂತ್ರಗಳ ಮಧ್ಯೆ ಸಿಕ್ಕಿ ಕೈ ನೆಜ್ಜಿಹೋದರೆ ಬಹು ಮೂಳೆಗಳು ಮುರಿದು ಪುಡಿಪುಡಿಯಾಗಿ, ಗಾಯ ಸಾಮಾನ್ಯವಾಗಿ ಕೀತುಗೊಳ್ಳುತ್ತದೆ. ಗಾಯ ವಾಸಿಯಾದ ಮೇಲೆ ಕೈ ಯಾವ ಸ್ಥಿತಿಯಲ್ಲಿರುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ. ಆ ಮೇಲಿನ ಸ್ಥಿತಿ ನೋಡಿಕೊಂಡು ಸಾಧ್ಯವಾದ ಶಸ್ತ್ರಚಿಕಿತ್ಸೆಯನ್ನು ಮಾಡಿ ಕೈ ಆದಷ್ಟು ಕಾರ್ಯಗತವಾಗುವಂತೆ ಮಾಡಬೇಕಾಗುತ್ತದೆ. ಮೂಳೆಗಳು ಮುರಿದರೆ ಇದ್ದರೂ ನೇರಗಾಯದಿಂದ ಒಂದೋ ಹೆಚ್ಚಾಗಿಯೋ ಕೀಲುಗಳಲ್ಲಿ ಉಳುಕು ಕಾಣಿಸಿಕೊಳ್ಳಬಹುದು. ಉಳುಕನ್ನು ಸರಿಪಡಿಸದೆ ಸಹನೀಯವಾಗಿರಬಹುದಾದ ನೋವು ಅನನುಕೂಲತೆಗಳನ್ನು ಸಹಿಸಿಕೊಂಡು ಉದಾಸೀನದಿಂದ ಬಹುಕಾಲ ಇದ್ದುಬಿಟ್ಟರೆ ಅವು ಹಾಗೇ ಸೆಟೆದುಕೊಂಡು ಕ್ರಮೇಣ ನರಗಳಿಗೋ ರಕ್ತನಾಳಗಳಿಗೋ ಘಾತ ಉಂಟಾಗಿ ಕೈಬೆರಳುಗಳನ್ನು ಚಲಿಸುವ ಮಾಂಸಖಂಡಗಳು ನಶಿಸಿಹೋಗುತ್ತವೆ. ನರ, ರಕ್ತ ನಾಳಗಳ ಹಸ್ತದಲ್ಲಿ ಅಥವಾ ತೋಳಿನಲ್ಲಿ ಸಂಭವಿಸಿದರೂ ಕೈಮಾಂಸಗಳು ಕ್ರಮೇಣ ಶಿಥಿಲಗೊಂಡು ಬೆರಳುಗಳು ಕೊಕ್ಕೆಯಂತೆ ಮಡಚಿಕೊಂಡು, ನೀಡುವುದಕ್ಕಾಗದೆ ಸುತ್ತಮುತ್ತಲಿನ ಸಾಮಾನುಗಳಿಗೆ ಸಿಕ್ಕಿಹಾಕಿಕೊಳ್ಳುವಂತಾಗಿ ತೊಂದರೆ ಆಗಬಹುದು.

	ಕೈಯ ಚÀರ್ಮ, ಸ್ನಾಯುಗಳು, ಮೂಳೆ ಕೀಲು ನರಗಳು ಯಾವುದರಲ್ಲಿಯೂ ಕೈ ರೋಗಗಳು ಕಾಣಿಸಿಕೊಳ್ಳಬಹುದು. ಕೆಲವು ಸ್ಥಾನಿಕವಾಗಿದ್ದರೆ ಕೆಲವು ಹರಡಿಕೊಳ್ಳುವ ರೀತಿಯವು. ಕೆಲವು ಅಣುಜೀವಿ ಆವೃತವಾಗಿ ಕೀತುಗೊಂಡು ಅಂತ್ಯ ಪರಿಣಾಮವನ್ನುಂಟು ಮಾಡಿದರೆ, ಸಂಧಿವಾತ, ಗೌಟ್, ಕೈಮೂಳೆಗಳ ಕ್ಷಯ, ಸೈರಿಂಗೋ ಮೈಯೇಲಿಯ ಮುಂತಾದ ಕೆಲವು ಖಚಿತವಾಗಿ ಕಾರಣವೇ ಗೊತ್ತಿಲ್ಲದೆ ಕಾಲಾನುಕ್ರಮದಲ್ಲಿ ಕೈಯ ಚಲನೆಯನ್ನು ಕುಂದಿಸುತ್ತವೆ. ಚಲನನಾಶದಿಂದ ಕೈಬೆರಳುಗಳು ಕ್ರಮೇಣ ಸೆಟೆದುಕೊಂಡು ಕೈ ನಿಷ್ಪ್ರಯೋಜಕವಾಗುತ್ತದೆ. ಅಥವಾ ಮೇಲೆ ಹೇಳಿದ ಸ್ಥಿತಿಗಳಲ್ಲಿ ಸಾಮಾನ್ಯವಾಗಿ ರೋಗದಿಂದ ಪೀಡಿತವಾದ ಕೀಲುಗಳೆಡೆಯಲ್ಲಿ ಸ್ನಾಯುಗಳು ಯಾವಾಗಲೋ ಇದ್ದಕ್ಕಿದ್ದಂತೆ ಕಿತ್ತುಹೋಗಿ ಬೆರಳುಗಳ ಚಲನೆ ನಾಶವಾಗಬಹುದು. ಉಗುರುಕಣ್ಣಿನಲ್ಲಿ ಆದ ಅಗಣನೀಯ ಗಾಯ ಕೀತುಗೊಳ್ಳುವುದರಿಂದ ಉಗುರುಸುತ್ತು ಬರುತ್ತದೆ. ಸಾಮಾನ್ಯವಾಗಿ ಅದು ವಾಸಿಯಾಗಿ ಹೊಸ ಉಗುರು ಹುಟ್ಟಿ ಕೈ ಸಹಜಕ್ರಿಯೆಯನ್ನು ಪಡೆಯುವುದಾದರೂ ಕೆಲವುವೇಳೆ ಅದು ವ್ಯಾಪಿಸಿ ಕೈ ಊನವಾಗುವಷ್ಟು ಅಗಾಧವಾಗುವುದೂ ಉಂಟು. ಗಣಿಸಬೇಕಾದ ಇನ್ನೊಂದು ಮುಖ್ಯ ಪರಿಸ್ಥಿತಿ ಎಂದರೆ ಸ್ನಾಯುವಿನ ರೋಗ. ಸ್ನಾಯುವಿನ ಸುತ್ತ ಚೀಲದಲ್ಲಿ ಕೀವು ತುಂಬಿಕೊಂಡು ಕೈಚಲನೆಗೆ ಅವಕಾಶವಾಗದೆ ಇರಬಹುದು. ಚಿಕಿತ್ಸೆ ಮಾಡದೆ ಬಿಟ್ಟರೆ ಇದರಿಂದಲೂ ಕೈ ಊನವಾಗುತ್ತದೆ. ಧರ್ಮ, ಮಾಂಸ, ಮೂಳೆ, ನರಗಳಲ್ಲಿ ದುರ್ಮಾಂಸ ಬೆಳೆದು ಆ ಗೆಡ್ಡೆಯ ಪರಿಣಾಮವಾಗಿ ಕೈ ಊನವಾಗಬಹುದು. ವಿಕೃತಿಗೊಳ್ಳಬಹುದು. ಇಲ್ಲವೆ ದುರ್ಬಲವಾಗಬಹುದು. ಗೌಟ್ ಎಂಬ ರೋಗದಲ್ಲಿ ಕೈಬೆರಳುಗಳ ಕೀಲುಗಳಲ್ಲಿ ಯೂರಿಕ್ ಆಮ್ಲದ ಹರಳುಗಳು ಜಮಾವಣೆಯಾಗಿ ಕೀಲು ವಿರೂಪಗೊಂಡು ಕೈ ನಿರುಪಯುಕ್ತವಾಗುತ್ತದೆ. ಕೆಲವು ಹೃದ್ರೋಗಗಳಲ್ಲಿ ಕೈಬೆರಳುಗಳ ತುದಿಗಳು ಅಗಲವಾಗಿಯೂ ದಪ್ಪವಾಗಿಯೂ ಮಾರ್ಪಾಡಾಗುತ್ತವೆ. ಆದರೆ ಇದರಿಂದ ಕೈಯ ಉಪಯುಕ್ತತೆಗೆ ಏನೂ ಕುಂದು ಇರುವುದಿಲ್ಲ. ಕೈಯಲ್ಲಿ ಸ್ವತಃ ಯಾವ ರೋಗ, ಊನ, ದುರ್ಬಲತೆ ಇಲ್ಲದಿದ್ದರೂ ಕೈಯ ಮಣಿಕಟ್ಟು, ಮೊಳಕೈ ಕೀಲುಗಳು ರೋಗದಿಂದ ಅಥವಾ ಅಪಘಾತದಿಂದ ವಿರೂಪಗೊಂಡಿದ್ದರೆ ಕೈ ಹೆಚ್ಚು ಕಡಿಮೆ ದುರ್ಬಲವಾಗಿರುತ್ತದೆ. ಪಾಶ್ವವಾಯು, ಪೋಲಿಯೋಮೈಲಿಟಿಸ್ (ಮಕ್ಕಳ ಸೆಳವುರೋಗ) ಮುಂತಾದ ರೋಗಗಳಲ್ಲಿ ಕೈಯನ್ನು ಚಲಿಸುವ ಮಾಂಸಖಂಡಗಳಿಗೆ ನಿರ್ದೇಶನ ಪೂರ್ಣವಾಗಿ ತಪ್ಪಿ ಅವು ಕ್ರಮೇಣ ಶಿಥಿಲಗೊಂಡು ಕೈಯ ಆಕಾರ, ಕ್ರಿಯಾಶಕ್ತಿ ಕುಂದಿ ಕೈ ಊನ ಆಗಬಹುದು. ಇಂಥ ಸನ್ನಿವೇಶಗಳಲ್ಲಿ ಶಸ್ತ್ರಚಿಕಿತ್ಸೆಯಿಂದ ಮಾಂಸಖಂಡಗಳಿಗೆ ನರನಿರ್ದೇಶನವನ್ನು ಒದಗಿಸಿ ಮತ್ತು ಮಾಂಸಖಂಡಗಳನ್ನು ಸತತ ಸಾಧನೆಯಿಂದ ಪ್ರಚೋದಿಸಿ ಗುಣಪಡಿಸಲು ಪ್ರಯತ್ನಿಸಲಾಗುತ್ತದೆ. ಖಚಿತ ಕಾರಣವೇ ತಿಳಿಯದೆ ಮಧ್ಯವಯಸ್ಕರಲ್ಲಿ ಬೆರಳುಗಳು ಕ್ರಮೇಣ ಮಡಚಿಕೊಂಡು ಸೇದಿಹೋಗಬಹುದು. ಇದನ್ನು ಡ್ಯೂಪೈಟ್ರೆನ್ನಿನ ಕಂಟ್ರಾಕ್ಟರ್ (ಸೆಳವು) ಎನ್ನುತ್ತಾರೆ. ಇದೇ ರೀತಿಯ ಸೆಳವು ಬೇರೆ ಯಾವುದಾದರೂ ಕಾರಣದಿಂದ ಬಹುಕಾಲ ಕೈಯನ್ನು ಚಲನೆಯೇ ಇಲ್ಲದೆ ಬಿಟ್ಟಿದ್ದರೂ ಕಂಡುಬರುತ್ತದೆ.

ಕೈರೋಗಗಳಿಗೆ ಊನಗಳಿಗೆ ಸಮದರ್ಭಾನುಸಾರ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಕೈಯ ವ್ಯಾಧಿ ಬಹುಕಾಲಿಕವಾಗಿ ಯಾತನೆ ಕೊಡುತ್ತಿದ್ದರೆ, ಹರಡಿಕೊಳ್ಳುವ ಅಥವಾ ಪ್ರಾಣಾಂತಕವಾಗುವ ಸಂಭವವಿದ್ದರೆ, ಚಿಕಿತ್ಸೆಯಿಂದ ಅನÀನುಕೂಲತೆ ಕಡಿಮೆ ಆಗಿ ಕೈಗಳ ಕಾರ್ಯ ಸಾಮಥ್ರ್ಯ ಉತ್ತಮಗೊಳ್ಳುವಂತಿದ್ದರೆ, ಶಸ್ತ್ರ ಚಿಕಿತ್ಸೆಯನ್ನು ಯೋಚಿಸಬಹುದು. ಬರೀ ಆಕಾರಪುನರ್ನಿರ್ಮಾಣಕ್ಕೆ ಮಾತ್ರ ಶಸ್ತ್ರ ಸಾಮಥ್ರ್ಯವನ್ನು ಉತ್ತಮಗೊಳಿಸುವುದು ಅಷ್ಟೇನೂ ಫಲಕಾರಿಯಾಗುತ್ತಿರಲಿಲ್ಲ. ಈಚೆಗೆ ಅಣುಜೀವಿ ನಿರೋಧಕ ಮದ್ದುಗಳ ಉಪಯೋಗದಿಂದ ಮತ್ತು ನೂತನ ಚಿಕಿತ್ಸಾ ವಿಧಾನಗಳಿಂದ ಶಸ್ತ್ರಚಿಕಿತ್ಸೆ ಗಣನೀಯವಾಗಿ ಫಲಕಾರಿಯಾಗಿದೆ. ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಿದ ಕೈಯ ಉಪಯೋಗವಿಧಾನವನ್ನು ಆದಷ್ಟು ಬೇಗನೆ ಪ್ರಾರಂಭಿಸಿ ಪಾಠಮಾಡಿಸಬೇಕಾದದ್ದು ಅಗತ್ಯ. ಕೈಗಾಯ ವಾಸಿಯಾಗಲಿ ಎಂದು ಕೈಗೆ ಅತಿಯಾದ ವಿಶ್ರಾಂತಿ ಕೊಟ್ಟರೆ ಕೈಬೆರಳುಗಳೂ ಸೆಟೆದುಕೊಂಡು ನಿಷ್ಪ್ರಯೋಜಕವಾಗಬಹುದೆಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಕೈಊನಗಳಿಗೆ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲದೆ ಇದ್ದಾಗ ಕೃತಕ ಕೈಗಳ ಅಳವಡಿಕೆಯನ್ನು ಯೋಚಿಸಬಹುದು.
(ಎಸ್.ಎಸ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ